ನಿರಾಲಂಬದೇವ
	1639-1711. ಶಿವಯೋಗಿ, ವಚನಕಾರ. ವಚನಗಳ ಅಂಕಿತ ಅಖಂಡೇಶ್ವರ ಎಂದಿದೆ. ಈತನನ್ನು ನಿರಾಲಂಬಶರಣ ಷಣ್ಮುಖ ಶಿವಯೋಗಿ ಎಂದೂ ಕರೆಯುತ್ತಾರೆ.

	ಹದಿನೇಳನೆಯ ಶತಮಾನದ ಬಳಿಕ ಶಿವಶರಣರ ವಚನ ಸಾಹಿತ್ಯ ಪರಂಪರೆ ಸ್ಥಗಿತಗೊಂಡದ್ದನ್ನು ಗಮನಿಸಿ ಈತನನ್ನು ಕೊನೆಯ ಶ್ರೇಷ್ಠ ವಚನಕಾರರೆಂದು ಹೇಳುವ ವಾಡಿಕೆಯಿದೆ. ಈತನ ತಂದೆ ತಾಯಿಗಳು ಮಲ್ಲಶೆಟ್ಟಪ್ಪ ಮತ್ತು ದೊಡ್ಡಮಾಂಬೆಯರು; ಗುರು ಅಖಂಡೇಶ್ವರ. ಗುರುವಿನ ಹೆಸರೇ ಈತನ ವಚನಗಳ ಅಂಕಿತವೂ ಆಗಿದೆ. ಗುಲ್ಬರ್ಗ ಜಿಲ್ಲೆಯಲ್ಲಿರುವ ಜೇವರಗಿ ಎಂಬ ಸ್ಥಳದಲ್ಲಿ ಈತ ಅಧಿಪತಿಯಾಗಿದ್ದ ಮಠವಿದೆ. ಈತನ ಹಾಗೂ ಈತನ ಗುರು ಅಖಂಡೇಶ್ವರರ ಗದ್ದುಗೆಗಳೆರಡೂ ಅಲ್ಲಿವೆ. ಈತನ ಹೆಸರಿನಲ್ಲಿ ರಥೋತ್ಸವ ಆ ಊರಿನಲ್ಲಿ ಇಂದಿಗೂ ನಡೆಯುತ್ತದೆ. ಜೇವರಗಿಗೆ ಸು. 10ಕಿಮೀ ದೂರದ ಕೊಳಕೂರ ಎಂಬ ಗ್ರಾಮದ ನಿಸರ್ಗ ಸುಂದರವಾದ ಕೊಳದಲ್ಲಿ ಈ ಶಿವಯೋಗಿ ತನ್ನ ಸಾರವತ್ತಾದ ಜೀವನದ ಸ್ವಲ್ಪ ಭಾಗವನ್ನು ಕಳೆದಿದ್ದನೆನ್ನಲು ಆಧಾರವಿದೆ. ಮುಂದೆ ಈತ ಅಖಂಡೇಶ್ವರರ ಉತ್ತರಾಧಿಕಾರಿಯಾಗಿ, ಜೇವರಗಿ ವಿರಕ್ತ ಮಠಕ್ಕೆ ಸ್ವಾಮಿಯಾದ. ಅಖಂಡೇಶ್ವರ ಮತ್ತು ಷಣ್ಮುಖ ಶಿವಯೋಗಿಗಳಿಂದ ಇಂದಿನವರೆಗೆ ಈ ಮಠದ ಪರಂಪರೆ ಅವಿಚ್ಛಿನ್ನವಾಗಿ ಬೆಳೆದು ಬಂದಿದೆ. ಈಗಿರುವ ಸ್ವಾಮಿಗಳು ಪರಂಪರೆಯಲ್ಲಿ ಹನ್ನೊಂದನೆಯವರು.

	ಈತನನ್ನು ಆ ಕಾಲದ ಸಾಮಾಜಿಕ ಅಂತರದ ವಿರುದ್ಧ ಹೋರಾಡಿದ ಕ್ರಾಂತಿಕಾರಿ ಎನ್ನಲಾಗಿದೆ. ಅಸ್ಪøಶ್ಯರ ಉದ್ಧಾರಕ್ಕಾಗಿ ಈತ ಶ್ರಮಿಸಿದ ಸಂಕೇತವಾಗಿ ಇಂದಿಗೂ ಜೇವರಗಿಯ ಹರಿಜನ ಕೇರಿಯಲ್ಲಿ ಶಿವಯೋಗಿಯ ಮಠವೊಂದಿದೆ. ಹರಿಜನರೊಡನೆ ಸಹಪಂಕ್ತಿಭೋಜನ ಮತ್ತು ಸಮಾನತೆಗಳನ್ನು ಕೇವಲ ಬೋಧಿಸದೆ ನಡೆದು ತೋರಿದ ಶಿವಯೋಗಿ ಈತ. ಅನೇಕರಿಗೆ ಶಿವದೀಕ್ಷೆಯನ್ನೂ ಕೊಟ್ಟನೆನ್ನಲಾಗಿದೆ. ಆದರೆ ಇದನ್ನು ಅಂದಿನ ಪ್ರತಿಷ್ಠಿತ ವೀರಶೈವರು ಒಪ್ಪಿದಂತೆ ಕಾಣುವುದಿಲ್ಲ. ಅಸ್ಪøಶ್ಯರನ್ನು ಒಪ್ಪಿಕೊಳ್ಳದವರನ್ನು ಒಡಂಬಡಿಸುವಂತಿರುವ ಈತನ ಒಂದು ವಚನ ಹೀಗಿದೆ : 

ನಾನಾವರ್ಣದ ಕಾಷ್ಠವ ಸುಟ್ಟಲ್ಲಿ ಏಕವರ್ಣದ ಬೂದಿಯಪ್ಪು ದಲ್ಲದೆ
ಆ ಕಾಷ್ಠದ ಕುಲ ಉಂಟೇ ಅಯ್ಯ?
ತೊಟ್ಟ ಬಿಟ್ಟ ಹಣ್ಣು ಮರಳಿ ತೊಟ್ಟ ಹತ್ತಬಲ್ಲದೇ ಅಯ್ಯ?
ಕಷ್ಟ ಜನ್ಮದಲ್ಲಿ ಹುಟ್ಟಿದಾತನಾದಡಾಗಲಿ
ನೆಟ್ಟನೆ ಶ್ರೀಗುರು ಕಾರುಣ್ಯವ ಪಡೆದು, ಇಷ್ಟಲಿಂಗ ಸಂಬಂಧಿಯಾಗಿ,
ಆಚಾರ ಕ್ರಿಯಾ ಸಂಪನ್ನನಾದ ಶರಣನ
ಜಾತಿ ಪೂರ್ವವ ಎತ್ತಿ ದೂಷಿಸುವ ಪಾತಕರ ಬಾಯಲ್ಲಿ
ಬಾಲ ಹುಳುಗಳು ಸುರಿಯದೆ ಮಾಣ್ಬವೆ ಹೇಳಾ ಅಖಂಡೇಶ್ವರಾ
ಅರ್ಹತೆಯಿದ್ದ ವ್ಯಕ್ತಿ ಯಾವ ಕುಲದವನಾದರೇನು, ಅವನನ್ನು ಹೊತ್ತು ಮೆರೆಯುವೆ ಎಂದು ಹಿಂದೆ ಬಸವಣ್ಣನವರು ಹೇಳಿದ್ದರು. ಇದೇ ಪರಂಪರೆಯನ್ನು ಈ ಶಿವಯೋಗಿಯೂ ಉಳಿಸಿಕೊಂಡು ಬಂದ.
 ಮಾದಾರ ಚೆನ್ನಯ್ಯನ ಬಾಯ ತಾಂಬೂಲವ ಮೆಲುವೆ
 ಡೋಹರ ಕಕ್ಕಯ್ಯನ ಒಕ್ಕು ಮಿಕ್ಕುದನುಂಬೆ
 ಚೋಳಿಯಕ್ಕನ ಊಳಿಗದವನಾಗುವೆ 
 ಶ್ವಪಚಯ್ಯನ ಆಳಾಗಿರುವೆ
 ಇನ್ನುಳಿದ ಸಕಲ ಗಣಂಗಳ ತೊತ್ತು ಬಂಟ ಲೆಂಕನಾಗಿ
 ರಾಜಾಂಗಣ ಬಳಿಯುವೆನಯ್ಯಾ ಅಖಂಡೇಶ್ವರಾ
	ಈತ ಒಟ್ಟು 717 ವಚನಗಳನ್ನೂ 41 ಜೋಗುಳ ಪದಗಳನ್ನೂ ರಚಿಸಿದ್ದಾನೆ. ವಚನ ಹಾಗೂ ಪದಗಳು ಅನುಭಾವಪೂರ್ಣವಾಗಿ, ಭಾವೋದ್ದೀಪಕವಾಗಿ ಅಂತರಾತ್ಮತೇಜೋಯುಕ್ತವಾಗಿವೆ.
(ಕೆ.ಎಂ.ಎಸ್.ಐ; ವಿ.ಎಸ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ